ಗೋಕುಲ ಮಹಾಸಮರ - ನಾಗಾಸಾಧುಗಳ ಪರಾಕ್ರಮ
HISTORY
Nachiketh Desai
11/23/20241 min read


ಇಂದಿನ ಯುವಪೀಳಿಗೆ ಅಂತರ್ಜಾಲ, ಸಾಮಾಜಿಕ ಜಾಲತಾಣಗಳೆಂಬ ಮಾಯಾಜಾಲದಲ್ಲಿ ಸಿಲುಕಿ ನಮ್ಮ ಮಣ್ಣಿನ ಉಳಿವಿಗಾಗಿ ಶೌರ್ಯವನ್ನು ಮೆರೆದು ಬಲಿದಾನ ಮಾಡಿದ ಸಾಹಸಿಗಳ ಬಗ್ಗೆ ಮರೆತೇ ಹೋಗಿದ್ದಾರೆ. ಅವರ ಪ್ರಕಾರ ಇತಿಹಾಸ ಎಂದರೆ ಬರೀ ಪಠ್ಯಪುಸ್ತಕದ ಒಂದು ಬೋರಿಂಗ್ ವಿಷಯ. ರಾಜ - ಮಹಾರಾಜರು ಐಷಾರಾಮಿ ಜೀವನ ನಡೆಸಿದ ಶ್ರೀಮಂತರು. ನಾಗಾಸಾಧುಗಳು ಮೈ ತುಂಬಾ ಬೂದಿ ಬಳಿದುಕೊಂಡು ಅರೆನಗ್ನರಾಗಿ ಭಂಗಿಯನ್ನು ಸೇದುವ ವ್ಯಸನಿಗಳು. ಆದರೆ ಇವರಿಗೇನು ಗೊತ್ತು ಹೇಗೆ ಈ ವ್ಯಸನಿಗಳು ಎನಿಸಿರುವ ನಾಗಾಸಾಧುಗಳು ಗೋಕುಲ ಎಂಬ ಊರನ್ನೇ ಅಫ್ಘನ್ನರ ದಾಳಿಯಿಂದ ರಕ್ಷಿಸಿದ್ದರು ಎಂಬುವುದು.
ಹೌದು!!!, ಕ್ರಿ.ಶ.1757ರಲ್ಲಿ ಸುಮಾರು 3000 ನಾಗಾಸಾಧುಗಳು ಅಹ್ಮದ್-ಷಾ-ಅಬ್ದಾಲಿಯ ಸೇನಾಧಿಪತಿ ಸರ್ದಾರ್ ಖಾನನ 10000 ಸಂಖ್ಯೆಯ ಸೈನ್ಯವನ್ನು ಹೊಡೆದುರುಳಿಸಿದ ರಕ್ತಸಿಕ್ತ ಅಧ್ಯಾಯ ಇವತ್ತಿನ ಈ ಅಂಕಣ.
ಯಾರು ಈ ನಾಗಾಸಾಧುಗಳು?
ನಾಗಾಸಾಧುಗಳು ಆದಿ ಗುರು ಶ್ರೀ ಶಂಕರಾಚಾರ್ಯರು ಎಂಟನೇ ಶತಮಾನದಲ್ಲಿ ಸನಾತನ ಧರ್ಮದ ಸಂರಕ್ಷಣೆಗೆಂದೇ ಹುಟ್ಟು ಹಾಕಿದ ಒಂದು ಯೋಧರ ಕುಲ. ಇವರು ಶಿವನ ಆರಾಧನೆಗೆ ಹಾಗೂ ಸಾಹಸ ಪರಾಕ್ರಮಗಳಿಗೆ ಪ್ರಸಿದ್ಧಿಯನ್ನು ಹೊಂದಿರುವವರು. ಈ ಹಿಂದೂ ಸನ್ಯಾಸಿಗಳು ಮೋಹವನ್ನು ತ್ಯಜಿಸಿ ಆಧ್ಯಾತ್ಮಿಕ ವಿಮೋಚನೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕೈಯಲ್ಲಿ ತ್ರಿಶೂಲ, ಮೈಯಲ್ಲಾ ಭಸ್ಮ, ಜಟಾಧಾರಿ, ಅರೆನಗ್ನಾವಸ್ಥೆಯಲ್ಲಿರುವ ಇವರುಗಳು ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಹಾಗೂ ಕೆಲ ಪುಣ್ಯಕ್ಷೇತ್ರಗಳಲ್ಲಿ ಕಂಡುಬರುತ್ತಾರೆ. ಕುಂಭಮೇಳದ ಸಮಯದಲ್ಲಿ ಜನಸಾಮಾನ್ಯರ ಕಣ್ಣಿಗೆ ಗೋಚರಿಸುತ್ತಾರೆ.
ಗೋಕುಲ ಯುದ್ಧ
ಕ್ರಿ.ಶ.1747ರಲ್ಲಿ ದುರಾನಿ ಬುಡಕಟ್ಟಿನ ನಾಯಕನಾದ ಅಹ್ಮದ್-ಷಾ-ಅಬ್ದಾಲಿ ಎಂಬುವಾತ ದುರಾನಿ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿ ಅದನ್ನು ಮಧ್ಯ ಏಷ್ಯಾ, ಈಶಾನ್ಯ ಇರಾನ್, ಈಗಿನ ಪಾಕಿಸ್ತಾನ, ಅಫ್ಘಾನಿಸ್ತಾನ, ಪೂರ್ವ ತುರ್ಕಮೆನಿಸ್ತಾನ್ ಅಷ್ಟೇ ಅಲ್ಲದೇ ವಾಯುವ್ಯ ಭಾರತದವರೆಗೂ ವಿಸ್ತರಿಸಿದ್ದ. ಕ್ರಿ.ಶ.1757ರಲ್ಲಿ ಅಹ್ಮದ್-ಷಾ-ಅಬ್ದಾಲಿಯ ಸೇನಾಧಿಪತಿಯಾದ ಸರ್ದಾರ್ ಖಾನ್ ಮುಂದಾಳತ್ವದಲ್ಲಿ ಮಥುರಾ ಹಾಗೂ ವೃಂದಾವನದ ಮೇಲೆ ದಾಳಿ ಮಾಡುತ್ತಾರೆ. ಇವೆರಡನ್ನೂ ವಶಪಡಿಸಿಕೊಂಡ ದುರಾನಿಗಳು ತಮ್ಮ ದುರಾಚಾರವನ್ನು ಎಸಗುತ್ತಾರೆ. ಸಾಮಾನ್ಯ ಜನರ ಮೇಲೆ ಎರಗಿ ಅವರನ್ನು ಹತ್ಯೆಗೀಡು ಮಾಡಿ, ಸ್ತ್ರೀಯರ ಮೇಲೆ ಅತ್ಯಾಚಾರವೆಸಗಿ, ಅಲ್ಲಿದ್ದ ಗುಡಿ ಗೋಪುರಗಳ ಧ್ವಂಸ ಮಾಡುತ್ತಾರೆ. ಮುಂದೆ ಅವರ ವಕ್ರದೃಷ್ಟಿ ಗೋಕುಲದೆಡೆಗೆ ಬೀಳುತ್ತದೆ. ಇದನ್ನು ಅರಿತ ಗೋಕುಲದ ನಾಗಾಸಾಧುಗಳ ನಾಯಕ ಅಜಾ, ತಮ್ಮ ನೆಲದ ಸಂರಕ್ಷಣೆಯ ಹೊಣೆಯನ್ನು ಹೊತ್ತು ಯುದ್ಧಕ್ಕೆ ಸಜ್ಜಾಗಿ ನಿಲ್ಲುತ್ತಾನೆ.
ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ತ್ರಿಶೂಲ, ಖಡ್ಗ ಹೀಗೆ ಕೈಗೆ ಸಿಗುವ ಬೇರೆ ಬೇರೆ ಆಯುಧಗಳನ್ನು ಹಿಡಿದು 3000 ನಾಗಾಸಾಧುಗಳು ಗೋಕುಲವನ್ನು ಉಳಿಸಿಕೊಳ್ಳುವ ಪಣವನ್ನು ತೊಟ್ಟು 10000 ಅಫ್ಘಾನ್ ದುರಾನಿಗಳ ಮಾರಣಹೋಮಕ್ಕೆ ತೊಡೆ ತಟ್ಟಿ ನಿಲ್ಲುತ್ತಾರೆ. ಆದರೆ ಅದು ಅಷ್ಟೊಂದು ಸುಲಭದ ಮಾತಾಗಿರಲಿಲ್ಲ. 300ಕ್ಕೂ ಹೆಚ್ಚು ಅಶ್ವದಳ, 100ಕ್ಕೂ ಮೀರಿದ ಗಜಪಡೆ ಹಾಗೂ 20 ಫಿರಂಗಿಗಳ ಜೊತೆಗೆ ದುರಾನಿ ಸೇನೆ ಗೋಕುಲದ ಕಡೆಗೆ ಧಾವಿಸಿತ್ತು. ಇದನ್ನು ಕಂಡು ಸ್ವಲ್ಪವೂ ಧೃತಿಗೆಡದ ನಾಗಾಸಾಧುಗಳು "ಹರ್ ಹರ್ ಮಹಾದೇವ್" ಎಂಬ ಸಮರಘೋಷದೊಂದಿಗೆ ವೀರಾವೇಶದಿಂದ ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿ 5000 ದುರಾನಿ ಸೇನೆಯನ್ನು ನಿರ್ನಾಮವಾಗಿಸುತ್ತಾರೆ. ಇನ್ನುಳಿದ ಕೆಲ ದುರಾನಿ ಪಡೆ ಗಂಭೀರ ಗಾಯಗೊಳ್ಳುತ್ತಾರೆ. ಇನ್ನೂ ಕೆಲವರು ಭಯಪಟ್ಟು ಓಡಿ ಹೋಗುತ್ತಾರೆ. ಈ ಒಂದು ಮಹಾಸಮರದಲ್ಲಿ 2000 ನಾಗಾಸಾಧುಗಳು ವೀರಮರಣವನ್ನಪ್ಪುತ್ತಾರೆ. ಈ ಘಟನೆ ಜರುಗಿದ ನಂತರ ದುರಾನಿಗಳು ಇನ್ನೆಂದೂ ಗೋಕುಲದ ಕಡೆಗೆ ದಾಳಿಯನ್ನು ಮಾಡುವ ದುಸ್ಸಾಹಸವನ್ನು ಮಾಡಲೇ ಇಲ್ಲ. ಭಕ್ತಿಯ ಜೊತೆಗೆ ಶಕ್ತಿಯನ್ನೊಗ್ಗೂಡಿ ಭಾರತದ ಅಸ್ಮಿತೆಯನ್ನು ಉಳಿಸಿದ ನಾಗಾಸಾಧುಗಳ ಈ ಸಾಹಸಗಾಥೆ ಇತಿಹಾಸದ ಪುಟಗಳಲ್ಲಿ ಎಂದೆಂದಿಗೂ ಅಮರವಾಗಿರುತ್ತದೆ.





