ಬೆಳಕಿನ ಹಬ್ಬ : ದೀಪಾವಳಿ
Significance of Deepavali
HISTORY
Nachiketh Desai
10/31/20241 min read


ಹಬ್ಬ ಹರಿದಿನಗಳು ಅಂದ್ರೇನೇ ಹಾಗೆ, ಎಲ್ಲೆಡೆ ಸಂಭ್ರಮ ಸಡಗರ. ಅದರಲ್ಲೂ ದೀಪಾವಳಿ ಹಬ್ಬದ ಬಗ್ಗೆ ಅಂತೂ ಕೇಳೋದೇಬೇಡ. ಚಿಕ್ಕ ಚಿಕ್ಕ ಮಕ್ಕಳಿಂದ ಮನೆಯ ಹಿರಿಜೀವಗಳೆಲ್ಲರು ಅತ್ಯಂತ ಆನಂದದಿಂದ ಕಳೆಯೋ ಅಧ್ಬುತ ಕ್ಷಣಗಳು. ಏನಿದು ದೀಪಾವಳಿ ಹಬ್ಬ? ಯಾವಾಗಿನಿಂದ ಇದು ಆಚರಣೆಗೆ ಬಂತು? ಏನು ಈ ಹಬ್ಬದ ವಿಶೇಷ ಅಂತ ಒಮ್ಮೆ ಮೆಲುಕು ಹಾಕೋಣ. ರತೀಯ ಕಾಲಮಾನದ ಪ್ರಕಾರ ಆಶ್ವಿಜ ಮಾಸದ ಕೊನೆಯಲ್ಲಿ ಹಾಗೂ ಕಾರ್ತಿಕ ಮಾಸದ ಆರಂಭದ ನಡುವೆ ಬರುವ ಈ ದೀಪಾವಳಿ ಹಬ್ಬವನ್ನು ಕೆಲವರು ಮೂರು ದಿನ, ಇನ್ನೂ ಕೆಲವರು ನಾಲ್ಕು ದಿನ ಆಚರಣೆ ಮಾಡ್ತಾರೆ. ಮನೆಯ ಪುಟಾಣಿ ಮಕ್ಕಳಂತೂ ಒಂದು ವಾರದ ಮುಂಚೆಯೇ ಹೊಸ ಬಟ್ಟೆ, ಪಟಾಕಿ ಖರೀದಿಯ ಉತ್ಸಾಹದಲ್ಲಿದ್ದರೆ, ಇನ್ನೂ ಮನೆಯ ಮಹಾಲಕ್ಷ್ಮಿ ಎನಿಸೋ ಯಜಮಾನಿ ಬಗೆ ಬಗೆಯ ತಿಂಡಿ ಸಿಹಿ ತಿನಿಸುಗಳ ತಯಾರಿಯಲ್ಲಿರುತ್ತಾಳೆ. ಮನೆಯ ಯಜಮಾನ ಇದೆಲ್ಲದರ ಉಸ್ತುವಾರಿ. ಮನೆಯ ಹಿರಿಜೀವಗಳು ಹಬ್ಬದ ಸರಿಯಾದ ಆಚರಣೆಯ ಸಲಹೆಗಾರರು.
ಪೌರಾಣಿಕ / ಐತಿಹಾಸಿಕ ಹಿನ್ನೆಲೆ
ದೀಪಾವಳಿ ಹಬ್ಬಕ್ಕೆ ಅದರದೇ ಆದ ಒಂದು ಇತಿಹಾಸ ಇದೆ. ಪೌರಾಣಿಕ ಹಿನ್ನೆಲೆ ಕೂಡ ಇದೆ. ಅದರಂತೆಯೇ ಇವತ್ತಿಗೂ ನಾವೆಲ್ಲರೂ ನಮ್ಮ ಆಚರಣೆಯಲ್ಲಿ ಅವುಗಳನ್ನ ಅನುಸರಿಸಿಕೊಂಡು ಬರುತ್ತಿದ್ದೇವೆ.
ನರಕ ಚತುರ್ದಶಿ :


ಈ ಒಂದು ದಿನದಂದು ಶ್ರೀ ಕೃಷ್ಣ ಹಾಗೂ ಸತ್ಯಭಾಮೆ ಇಬ್ಬರೂ ಕೂಡಿಕೊಂಡು ನರಕಾಸುರ ಎಂಬ ರಾಕ್ಷಸನ ವಧೆಯನ್ನು ಮಾಡಿ ಆತ ಬಂಧಿಸಿದ ಹದಿನಾರು ಸಾವಿರ ಮಹಿಳೆಯರನ್ನು ಬಿಡುಗಡೆ ಮಾಡುತ್ತಾರೆ. ಆ ನಂತರ ಶ್ರೀಕೃಷ್ಣನು ಬ್ರಾಹ್ಮೀ ಮುಹೂರ್ತದಲ್ಲಿ ತೈಲ ಸ್ನಾನವನ್ನು ಮಾಡಿರುತ್ತಾನೆ. ಅದನ್ನೇ ಇಂದಿಗೂ ಕೂಡ ನಾವು ಪಾಲಿಸುತ್ತ ಆ ದಿನದಂದು ತೈಲ ಸ್ನಾನವನ್ನು ಮಾಡುತ್ತೇವೆ. ನರಕಾಸುರನ ವಧೆ ಚತುರ್ದಶಿಯಂದು ಆಗಿದ್ದರಿಂದ ಇದಕ್ಕೆ ನರಕ ಚತುರ್ದಶಿ ಎಂಬ ಹೆಸರು ಬಂತು.
ಅಮಾವಾಸ್ಯೆ :


ಸಮುದ್ರ ಮಂಥನದ ಮೂಲಕ ಜನ್ಮತಾಳಿದ ಲಕ್ಷ್ಮೀದೇವಿ ಹುಟ್ಟಿದ್ದು ಈ ದಿನದಂದೇ ಎನ್ನುವ ನಂಬಿಕೆ ಇದೆ. ಹಾಗಾಗಿ ಅಮಾವಾಸ್ಯೆಯ ದಿನ ಮನೆಯನ್ನು ಸ್ವಚ್ಛಗೊಳಿಸಿ ಹೂವಿನಿಂದ ಅಲಂಕಾರ ಮಾಡಿ ದೀಪವನ್ನು ಹಚ್ಚಿ ಲಕ್ಷ್ಮೀದೇವಿಯ ಪೂಜೆಯನ್ನು ಮಾಡುತ್ತಾರೆ. ಯಾರು ಈ ರೀತಿ ಲಕ್ಷ್ಮಿಯ ಆರಾಧನೆ ಮಾಡುತ್ತಾರೋ ಅವರ ಮನೆ ಸಂಪದ್ಭರಿತವಾಗಿರುತ್ತೆ ಅನ್ನೋದು ನಂಬಿಕೆ.
ಬಲಿಪಾಡ್ಯಮಿ :


ವಿಷ್ಣು ಆರಾಧಕ ಪ್ರಹ್ಲಾದ ರಾಜನ ಮೊಮ್ಮಗನಾದ ಬಲಿಚಕ್ರವರ್ತಿ ಎಂಬ ಅಸುರ ಅರಸನ ವಧೆಯಾದ ದಿನವೇ ಬಲಿಪಾಡ್ಯಮಿ. ಆತ ಪರಾಕ್ರಮಿಯಾಗಿದ್ದು ಸಕಲ ಲೋಕಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿರುತ್ತಾನೆ. ಇದರಿಂದ ಗಾಬರಿಗೊಂಡ ದೇವತೆಗಳು ವಿಷ್ಣುವಿನ ಬಳಿ ಹೋಗಿ ತಮ್ಮನ್ನು ಉಳಿಸುವಂತೆ ಬೇಡುತ್ತಾರೆ. ಆಗ ವಾಮನ ಅವತಾರವನ್ನು ತಾಳಿದ ವಿಷ್ಣು ಬಲಿ ಚಕ್ರವರ್ತಿಯ ಬಳಿ ಹೋಗಿ ತನಗೆ ಮೂರು ಹೆಜ್ಜೆಯಷ್ಟು ಜಾಗವನ್ನು ದಾನವಾಗಿ ನೀಡುವಂತೆ ಕೇಳುತ್ತಾನೆ. ಅದಕ್ಕೆ ಬಲಿಯೂ ಸಮ್ಮತಿಸುತ್ತಾನೆ. ಆಗ ವಾಮನನು ಮೊದಲನೆಯ ಹೆಜ್ಜೆಯನ್ನು ಭೂಮಿಯ ಮೇಲೆ, ಎರಡನೆಯ ಹೆಜ್ಜೆ ಆಕಾಶಮಾರ್ಗದ ಸ್ವರ್ಗದ ಮೇಲೆಯೂ ಹಾಗೂ ಮೂರನೆಯ ಹೆಜ್ಜೆ ಬಲಿ ಚಕ್ರವರ್ತಿಯ ತಲೆಯ ಮೇಲಿಟ್ಟು ಅವನನ್ನು ಪಾತಾಳಕ್ಕೆ ನೂಕುತ್ತಾನೆ. ಇದರಿಂದ ದೇವತೆಗಳಿಗೆ ಅವರ ವಾಸಸ್ಥಾನ ಮರಳಿ ದೊರೆಯುತ್ತದೆ. ಇಂದಿಗೂ ಕೆಲ ಜನರು ಬಲಿ ಚಕ್ರವರ್ತಿಯ ರೂಪದಲ್ಲಿ ಒಂದು ಮಣ್ಣಿನ ಮೂರ್ತಿಯನ್ನು ಮಾಡಿ ಅದರೊಳಗೆ ಪಟಾಕಿಯನ್ನಿಟ್ಟು ಸುಡುತ್ತಾರೆ.
ಇದಷ್ಟೇ ಅಲ್ಲದೇ ರಾವಣನ ಸಂಹಾರದ ನಂತರ ಶ್ರೀ ರಾಮ ಸೀತೆ ಹಾಗೂ ಲಕ್ಷ್ಮಣ ಸಮೇತನಾಗಿ ವನವಾಸವನ್ನು ಮುಗಿಸಿ ಅಯೋಧ್ಯೆಗೆ ಮರಳಿದ್ದು ಇದೇ ದೀಪಾವಳಿಯ ಸಮಯದಲ್ಲಿ ಎಂದು ವಿಜ್ರಂಭಣೆಯಿಂದ ಈ ದೀಪಗಳ ಹಬ್ಬವನ್ನು ಆಚರಿಸುತ್ತಾರೆ.
ಆರ್ಥಿಕ ಹಿನ್ನೆಲೆ


ಹಬ್ಬಗಳ ಆಚರಣೆಯಿಂದ ಬರೀ ಮನೆ ಮನಗಳಷ್ಟೇ ಅಲ್ಲದೇ ದೇಶದ ಆರ್ಥಿಕತೆಯು ಆರೋಗ್ಯಕರವಾಗಿರುತ್ತದೆ ಅನ್ನೋ ವಿಷಯ ಕೇಳಿದ್ರೆ ಆಶ್ಚರ್ಯ ಅನಿಸುತ್ತೆ. ಹೌದು, ಇದು ಅತಿಶಯೋಕ್ತಿಯಲ್ಲ. ದೀಪಾವಳಿ ಹಬ್ಬ ಎಂದರೆ ದೀಪದ ಹಣತೆಗಳ ಖರೀದಿಯಿಂದ ಹಿಡಿದು ಹೂವು, ಹಣ್ಣು, ಸಿಹಿತಿಂಡಿ, ಪೂಜೆ ಸಾಮಗ್ರಿ, ಪಟಾಕಿ, ಆಭರಣ, ಹೊಸ ಬಟ್ಟೆ ಹಾಗೂ ಇನ್ನೂ ಅನೇಕ ಅಲಂಕಾರಿಕ ವಸ್ತುಗಳ ವ್ಯಾಪಾರವಾಗುತ್ತದೆ. ಇನ್ನೂ ಕೆಲವು ಜನರು ದೀಪಾವಳಿಯನ್ನು ಶುಭದಿನವೆಂದು ಪರಿಗಣಿಸಿ ಹೊಸ ಮನೆ, ವಾಹನ ಹಾಗೂ ಇನ್ನಿತರ ವಸ್ತುಗಳ ಖರೀದಿಯನ್ನು ಮಾಡುತ್ತಾರೆ. ಇದು ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತದೆ. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ವರದಿಯ ಪ್ರಕಾರ ದೇಶದಲ್ಲಿ ಸುಮಾರು ನಾಲ್ಕು ಲಕ್ಷ ಕೋಟಿ ರೂಪಾಯಿಗೂ ಅಧಿಕ ವ್ಯಾಪಾರ ದೀಪಾವಳಿಯ ಪ್ರಯುಕ್ತ ನಡೆಯುತ್ತೆ. ಒಟ್ಟಿನಲ್ಲಿ ಹೇಳುವುದಾದರೆ ಅಂಧಕಾರವೆಂಬ ಕತ್ತಲೆಯಿಂದ ಪಾರಾಗಲು ಜ್ಞಾನವೆಂಬ ದೀಪವನ್ನು ಹಚ್ಚುವ ಸಾಂಕೇತಿಕ ಹಬ್ಬವೇ ದೀಪಾವಳಿ.